ಚುಕ್ಕೆ ಸೊಪ್ಪು-
ಪಾಲಿಗೊನೇಸೀ ಕುಟುಂಬಕ್ಕೆ ಸೇರಿದ ಜನಪ್ರಿಯ ಸೊಪ್ಪು ತರಕಾರಿ. ಹುಳಿಬಸಳೆ ಸೊಪ್ಪು ಪರ್ಯಾಯ ನಾಮ. ರೂಮೆಕ್ಸ್ ವೆಸಿಕೇರಿಯಸ್ ಇದರ ಶಾಸ್ತ್ರೀಯ ನಾಮ. ಇದು ಆಫ್ರಿಕದ ಮೂಲನಿವಾಸಿ. ಭಾರತದಲ್ಲೂ ಕಂಡುಬರುತ್ತದೆ. ಇದು ಒರಟು ಜಾತಿಯ ಏಕವಾರ್ಷಿಕ ಸಸ್ಯ; 15-40 ಸೆಂ.ಮೀ. ಎತ್ತರ ಬೆಳೆಯುತ್ತದೆ. ಮೆತುವಾದ ರಸವತ್ತಾದ ಕಾಂಡ ಮತ್ತು ಎಲೆಗಳಿವೆ. ಎಲೆಗಳ ಆಕಾರ ಅಂಡದಂತೆ; ಜೋಡಣೆ ಅಭಿಮುಖ ಮಾದರಿಯದು. ಇದನ್ನು ಬೀಜದಿಂದ ವೃದ್ಧಿಸುತ್ತಾರೆ. ಬೇರೆ ಸೊಪ್ಪನ್ನು ಬೆಳೆಯುವಾಗ ಹದಮಾಡುವಂತೆ ಭೂಮಿಯನ್ನು ಹದಗೊಳಿಸಿ, ಮಡಿಗಳನ್ನು ಅಥವಾ ಪಾತಿಗಳನ್ನು ಮಾಡಿ ಗಿಡದಿಂದ ಗಿಡಕ್ಕೆ 8-10 ಸೆಂ.ಮೀ. ಅಂತರವಿಟ್ಟು ಮತ್ತು ಸಾಲಿನಿಂದ ಸಾಲಿಗೆ 30 ಸೆಂ.ಮೀ. ಅಂತರವಿರುವಂತೆ ಬೀಜ ಬಿತ್ತಲಾಗುತ್ತದೆ. ಬಿತ್ತುವ ಕಾಲ ಅಕ್ಟೋಬರ್, ವಾರಕ್ಕೊಂದಾವರ್ತಿ ನೀರನ್ನು ಕಟ್ಟುತ್ತಿದ್ದರೆ ಸಾಕು. ಚುಕ್ಕೆ ಸೋಪ್ಪಿನ ರಸವನ್ನು ತಂಪುಕಾರಕವಾಗಿಯೂ ಹಲ್ಲುನೋವಿನ ಔಷಧಿಯಾಗಿಯೂ ಬಳಸುತ್ತಾರೆ. ಇದರ ಬೀಜ ಮತ್ತು ಬೇರುಗಳಿಂದ ಸಹ ಔಷಧೀಯ ಗುಣಗಳಿವೆ.

(ಎಂ.ಎಚ್.ಎಂ.; ಎನ್.ಆರ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ